Untitled Document
Sign Up | Login    
ಬರವಿಗಾಗಿ ಕಾದವಳು ( ಭಾಗ - 01 )

ಯತೋ ವಾಚೋ ನಿವರ್ತಂತೇ...

ಮತಂಗ ಮಹರ್ಷಿಗಳ ಕಂಚಿನ ಕಂಠ ಮೊಳಗುತ್ತಿತ್ತು. ಆಜ್ಯಾಹುತಿಯಾದಂತೆಲ್ಲ ಯಜ್ಞಕುಂಡದಲ್ಲಿ ಅಗ್ನಿಜ್ವಾಲೆ ತನ್ನ ಕೆನ್ನಾಲಿಗೆಯನ್ನು ಎತ್ತರೆತ್ತರಕ್ಕೆ ಚಾಚುತ್ತಿತ್ತು. ಋತ್ವಿಜರು ಸಾಲು ಸಾಲಾಗಿ ಕುಳಿತು ಜಪ ಪಾರಾಯಣಗಳಲ್ಲಿ ತೊಡಗಿದ್ದರು. ಸುತ್ತಮುತ್ತಲಿನ ಗುಡ್ಡಗಾಡು, ವನಪ್ರದೇಶದ, ಹತ್ತಿರದ ನಾಡಿನ ಶಿಷ್ಯವೃಂದ ಹಾಗೂ ವನವಾಸೀ ಜನಸ್ತೋಮ ನೆರೆದಿತ್ತು. ತಮ್ಮ ಗುರುಗಳ ಅಂತಿಮ ದರ್ಶನಕ್ಕಾಗಿ ಎಲ್ಲರೂ ಕಿತ್ತೆದ್ದು ಬಂದಿದ್ದರು. ಕುಲಪತಿ ಮತಂಗ ಮಹರ್ಷಿಗಳು ಮಹಾ ಪ್ರಸ್ಥಾನಗೈಯುವವರಿದ್ದರು.

ಪೂರ್ಣಾಹುತಿಗೆ ಮುನ್ನ ಮತಂಗ ಮಹರ್ಷಿಗಳು ತಮ್ಮ ಗಂಭೀರ ಸ್ವರದಲ್ಲಿ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಹೀಗೆ ನುಡಿದರು:

" ನನ್ನ ಪ್ರೀತಿಯ ಬಂಧುಗಳೇ, ನಿಮ್ಮ ಬದುಕು ಶ್ರೀಮಂತವಾಗಲಿ. ಕಾಲಕಾಲಕ್ಕೆ ಮಳೆ ಸುರಿಯಲಿ. ಕಾಡಿನಲ್ಲಿಯೂ, ನಾಡಿನಲ್ಲಿಯೂ ಬೆಳೆಯು ಸಮೃದ್ಧವಾಗಲಿ. ಪೃಥ್ವಿಯು ಸಸ್ಯ ಶಾಲಿನಿಯಾಗಲಿ. ಸಜ್ಜನರು ನಿಭರ್ಯದಿಂದ ಬದುಕುವಂತಾಗಲಿ. ದುರ್ಜನರಿಗೆ ಸದ್ಭುದ್ಧಿ ಬರಲಿ. ಅವರು ತಿದ್ದಿಕೊಳ್ಳದೇ ಹೋದಲ್ಲಿ ಶಿಕ್ಷಿತರಾಗಲಿ. ಮಾನವೀಯತೆ ತೇಜೋಮಯವಾಗಲಿ. ನಿಮ್ಮೆಲ್ಲರಿಗೂ ಸನ್ಮಂಗಳವಾಗಲಿ. ನಾನು ಹೊರಡುವ ಕಾಲ ಸನ್ನಿಹಿತವಾಯಿತು. ಇದೋ ಕರಜೋಡಿಸುವೆ. ನನಗೆ ಅಪ್ಪಣೆ ಕೊಡಿ''.

ಇಡೀ ಸಭೆ ಸ್ತಬ್ಧವಾಯಿತು. ಆಶೀರ್ವದಿಸುವ ಕೈಗಳು ವಂದಿಸುತ್ತಿವೆ. ಎಲ್ಲರೂ ಗದ್ಗದಿತರಾದರು. ಆದರೆ ಯಾರೂ ಶಾಂತಿ ಭಂಗ ಮಾಡುವಂತಿಲ್ಲ. ದೊಡ್ಡದಾಗಿ ರೋಧಿಸುವಂತಿಲ್ಲ. ಮೌನವಾಗಿ ಗುರುವರ್ಯರನ್ನು ಬೀಳ್ಕೊಡುತ್ತಿದ್ದರು.
ಅನತಿ ದೂರದಲ್ಲಿ ಮೈಮರೆತು ಕುಳಿತಿದ್ದ ಆಕೆ ಮೆಲ್ಲನೆದ್ದು ಬಂದಳು. ಮಹರ್ಷಿಗಳ ಚರಣಕಮಲಗಳಿಗೆ ಹಣೆಯಿಟ್ಟು ಬೇಡಿಕೊಳ್ಳಹತ್ತಿದಳು.

ಕಣ್ಣಿಂದ ಹನಿಗಳು ತೊಟ್ಟಿಕ್ಕುತ್ತಿದ್ದವು. "ಗುರುದೇವ, ನಾನೂ ತಮ್ಮೊಂದಿಗೆ ಬರುವೆ. ನನ್ನನ್ನೂ ಒಯ್ಯುತ್ತೀರೆಂದು ವಿಶ್ವಾಸ ಹೊಂದಿದ್ದೇನೆ. ಇದುವರೆಗೆ ನಿಮ್ಮೊಂದಿಗೆ ನಿಮ್ಮ ಪಾದ ಸೇವಾ ಕೈಂಕರ್ಯ ಮಾಡಿಕೊಂಡಿದ್ದ ನಿಮ್ಮ ಶಿಷ್ಯೆಯನ್ನು ಬಿಟ್ಟು ಹೋಗಬಾರದು..''.

ಶಿಷ್ಯೆಯ ಮಾತನ್ನು ಅರ್ಧದಲ್ಲಿಯೇ ತಡೆದು ಮಹರ್ಷಿಗಳು ಉಸುರಿದರು; " ತಾಪಸಿ ಶಬರಿ, ನೀನಿನ್ನೂ ಹೊರಡುವ ಕಾಲ ಬಂದಿಲ್ಲ; ಕಾಲನ ಕರೆ ಬಂದಾಗ ಮಾತ್ರ ಹೊರಡಲೇ ಬೇಕು. ನಿನಗೆ ನಿನ್ನದಾದ ಕರ್ತವ್ಯ ಕರ್ಮ ಇನ್ನೂ ಮುಗಿಸಿಲ್ಲ. ಪುತ್ರಿ, ಇಕ್ಷ್ವಾಕು ಕುಲ ಸುಪುತ್ರ ಶ್ರೀರಾಮಚಂದ್ರ ಸೀತೆಯನ್ನು ಅರಸುತ್ತಾ ಇಲ್ಲಿಗೆ ಬರುತ್ತಾನೆ. ಅದುವರೆಗೆ ತಪಸ್ಸು ಮಾಡಿಕೊಂಡು ಇಲ್ಲೇ ಇರು, ಕಾಯುತ್ತಿರು. ಶ್ರೀರಾಮನಿಗೆ ಆತಿಥ್ಯ ನೀಡಿ, ಉಪಚರಿಸಿ, ಅವನಿಂದ ಅನುಗ್ರಹೀತಳಾಗು. ಆ ಮೇಲೆ ನಿಲ್ಲದಿರು. ನನ್ನ ದಾರಿ ನಿನಗೆ ಗೋಚರವಾಗುತ್ತದೆ. ಪ್ರಕಾಶಮಾನವಾದ ಆ ದಾರಿಯಲ್ಲಿ ಸಾಗಿ ಬಾ...''

ಗುರುವರ್ಯರ ಅಣತಿ. ಪಡಿನುಡಿಯುವಂತಿಲ್ಲ. ಮಹರ್ಷಿಗಳ ಮಾತೆಂದರೆ ಹಾಗೆ. ದೃಢ ಚಿತ್ತ. ದೃಢ ನುಡಿ. ಶಬರಿ ಒಪ್ಪಿಗೆ ಎನ್ನುವಂತೆ ತಲೆಯಲ್ಲಾಡಿಸಿದಳು. ಮಾತು ಮುಗಿಯಿತು. ಈಗ ಜನ ಭಾವನೆಗಳನ್ನು ವ್ಯಕ್ತಪಡಿಸುವ ಸಮಯ. ಕೂಡಿದ ಜನಸ್ತೋಮ ಉಧೋ ಉಧೋ ಎನ್ನ ತೊಡಗಿತು. ಜಯ ಜಯಕಾರ ಮುಗಿಲು ಮುಟ್ಟಿತು.

ಮತಂಗ ಮಹರ್ಷಿಗಳು ಹೋಮ ಸಮರ್ಪಣೆ ಮಾಡಿದರು. ದಿವ್ಯ ಮಂತ್ರವನ್ನು ಜಪಿಸು‌ತ್ತಾ ಪೂರ್ಣಾಹುತಿಯಾಗಿ ತನ್ನನ್ನೇ ತಾನು ಯಜ್ಞೇಶ್ವರನಿಗೆ ಸಮರ್ಪಿಸಿಕೊಂಡರು. ಶಿಷ್ಯಕೋಟಿಯ ಶೋಕೋದ್ಗಾರ ನಭವನ್ನು ವ್ಯಾಪಿಸುತ್ತಿದ್ದಂತೆಯೇ ಪ್ರಕಾಶಮಾನವಾಗಿ ಬೆಳಗುತ್ತ ದಿವ್ಯ ಜ್ಯೋತಿಯೊಂದು ದಿಗಂತದಲ್ಲಿ ಲೀನವಾಯಿತು.
***

ರೇಷ್ಮೆಯಂತೆ ಮೃದುವಾದ ಜರತಾರಿ ಅಂಚಿನ ಸೀರೆಯಲ್ಲಿ ಕಂಗೊಳಿಸುತ್ತಿರುವ ಭೂರಮೆಯ ಸೌಂದರ್ಯ ಮಂತ್ರಮುಗ್ಧಗೊಳಿಸುತ್ತಿತ್ತು. ಗಿಡಮರಗಳು ಚಿನ್ನದ ಚಿಗುರು ಹೊತ್ತು ಮಿಂಚುತ್ತಿದ್ದವು. ಸುಗಂಧ ಭರಿತ ಹೂಗಳ ರಾಶಿ ಚೆಲ್ಲಿತ್ತು. ತನಿವಣ್ಣುಗಳ ಭಾರದಿಂದ ಗಿಡಗಳು ಬಾಗಿದ್ದವು. ನವಿಲು ಗರಿಬಿಚ್ಚಿ ವಿನೂತನ ಭಂಗಿಯಲ್ಲಿ ನರ್ತಿಸುತ್ತಿತ್ತು. ಗಿಳಿ, ಕೋಗಿಲೆ, ಕಾಗೆ, ಗೂಬೆ, ಗುಬ್ಬಿ, ಗೊರವಂಕ, ಬೆಳ್ಳಕ್ಕಿ, ಪಾರಿವಾಳ ಹೀಗೆ ವಿಧ ವಿಧ ಪಕ್ಷಿ ಸಂಕುಲ ಸ್ವಚ್ಛಂದವಾಗಿ ವಿಹರಿಸುತ್ತ ಕಲನಾದ ಗೈಯುತ್ತಿದ್ದವು. ಜಿಂಕೆ, ಹುಲಿ, ಆನೆ-ಸಿಂಹ, ಹಾವು-ಮುಂಗುಸಿ, ನರಿ- ತೋಳ, ಚಿರತೆ-ಸಾರಂಗ ಎಲ್ಲ ಪರಸ್ಪರ ನೆಕ್ಕಿಕೊಳ್ಳುತ್ತ ದ್ವೇಷ ಮರೆತು ಸ್ನೇಹದಿಂದ ಸಂಚಲಿಸುತ್ತಿದ್ದವು. ಪ್ರಶಾಂತ ಜಲರಾಶಿಯ ಪುಷ್ಕರಣಿ "ಪಂಪಾ ಸರೋವರದ'' ಮೇಲಿಂದ ಹಾದು ಬಂದ ತಂಗಾಳಿ ಕುಸುರು ಹನಿಯ ಸೇಚನ ಗೈಯುತ್ತಿತ್ತು. ಪಂಪಾ ಸರೋವರದ ತೀರದಲ್ಲಿ ಹಲವಾರು ಬಗೆಯ ಗಿಡಬಳ್ಳಿಗಳೂ ಪದ್ಮಗಳೂ, ಕುಮುದ ಮಂಡಲಗಳೂ, ಸೌಗಂಧಿಕಾ ಪುಷ್ಪಗಳೂ ಒತ್ತೊತ್ತಾಗಿ ಅರಳಿದ್ದವು. ಕೆಂದಾವರೆಗಳೂ, ಬಿಳಿದಾವರೆಗಳೂ ನಯನಮನೋಹರವೆನಿಸಿದ್ದವು. ಸುತ್ತಲೂ ಮಾವು, ಆಲ, ಅಶೋಕ, ಕೇದಗೆ, ತಾಳೆ ಮುಂತಾದ ಮರ ಗಿಡಗಳೂ ಸೊಂಪಾಗಿ ಬೆಳೆದು ನಿಂತು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು.

ಅದೇ ಪವಿತ್ರ ಪಂಪಾ ಸರೋವರದ ದಂಡೆಯ ಮೇಲೆಯೇ ಈ ಮತಂಗ ಮಹರ್ಷಿಗಳ ಪುಣ್ಯಾಶ್ರಮವಿದ್ದಿತ್ತು. ಸುತ್ತಲೂ ವ್ಯಾಪಿಸಿರುವ ವನವೇ "ಮತಂಗವನ''. ಅದೊಂದು ಒಂಟಿ ಪರ್ಣಕುಟಿ. ಸಿದ್ಧಚೈತನ್ಯ ಸಂಕೇತವಾದ ಮಹಿಮಾನ್ವಿತ ಮತಂಗಾಶ್ರಮ. ಮಹಾತಪಸ್ವಿಗಳೂ ಲೋಕೋತ್ತರ ಚೇತನರೂ, ಕುಲಪತಿಗಳೂ ಆಗಿದ್ದ ಮತಂಗ ಮುನಿಗಳು ಅದಾಗಲೇ ಮಹಾಪ್ರಸ್ಥಾನ ಗೈದಿದ್ದರು. ಶಿಷ್ಯೆ ಶಬರಿ ಗುರುಗಳ ಅಣತಿಯಂತೆ ರಾಮನ ಬರವಿಗಾಗಿ ಕಾದಿದ್ದಳು.
ಮಹರ್ಷಿಗಳು ತೆರಳಿದಂದಿನಿಂದಲೂ ರಾಮ ಬರುವನೆಂದು ಆಕೆ ಕಾಯುತ್ತಲೇ ಇದ್ದಾಳೆ. ಕಾಯುವ ಕಷ್ಟವನ್ನು ದೇವರೇ ಬಲ್ಲ; ಅನುಭವಿಸಿದನೇ ಹೇಳಬಲ್ಲ. ಆದರೆ ಆಕೆಗೆ ಅದೊಂದು ಕಷ್ಟವೇ ಅಲ್ಲ; ಶ್ರದ್ಧೆಯ ಕಾಯಕ. ಭಕ್ತಿಯಿಂದ ಆಚರಿಸುತ್ತಿರುವ ತಪಸ್ಸು.

ದಿನವೂ ಹುಬ್ಬಿನ ಮೇಲೆ ಕೈಯಿಟ್ಟು ದಾರಿಯುದ್ದಕ್ಕೂ ದೂರದವರೆಗೆ ನಿಟ್ಟಿಸುತ್ತ ಪ್ರತೀಕ್ಷಿಸುತ್ತಾಳೆ.
ದಿನ ಮಾಸ ಋತುಗಳು ಕಳೆದು ಹೋದವು! ಎಷ್ಟು ವರ್ಷಗಳಾದವೋ ಆಕೆಗೆ ನೆನಪಿಲ್ಲ. ಆಕೆಯ ಕೂದಲು ನರೆತು ಅನೇಕ ವರ್ಷಗಳು ಉರುಳಿವೆ. ಮುಪ್ಪಿನಿಂದ ದೇಹ ಜರ್ಜರಿತವಾಗಿದ್ದರೂ ಕಾಯುವ ಕಣ್ಣುಗಳು ಸೋತಿಲ್ಲ. ಭಕ್ತಿ ವಾತ್ಸಲ್ಯ ಕರಗಿಲ್ಲ. ಕಣ್ಣು ಮಂಜಾಗುತ್ತ ಬಂದರೂ ರಾಮನನ್ನು ಕಾಣದೇ ಕಣ್ಣುಗಳು ಆರುವುದಿಲ್ಲವೆಂಬ ಆಕೆಯ ದೃಢ ವಿಶ್ವಾಸ ಕುಂದಿಲ್ಲ. ಬದಲಿಗೆ ಇನ್ನೂ ದೇದೀಪ್ಯಮಾನವಾಗಿ ಬೆಳಗುತ್ತಿದೆ. ಕಣ್ಣಿನ ಕಾಂತಿ ಮಿನುಗುತ್ತಿದೆ.

ಆಕೆ - ವೃದ್ಧ ತಪಸ್ವಿನಿ ಶಬರಿ " ಈ ದಿನ ಖಂಡಿತ ರಾಮ ಬರುತ್ತಾನೆ ಎಂಧು ಕಾಡಿನಿಂದ ಹಣ್ಣುಗಳನ್ನು ತಂದು ಇಡುತ್ತಾಳೆ. ಮಣ್ಣಿನ ಪೀಠ ಸ್ವಚ್ಚಗೊಳಿಸಿ ರಂಗವಲ್ಲಿ ಇಟ್ಟು ದರ್ಭಾಸನ ಹಾಸುತ್ತಾಳೆ. ಈ ಹಣ್ಣು ರಾಮನಿಗೆ ಇಷ್ಟವಾಗುತ್ತದೆ. ಈ ಹೂ ರಾಮನಿಗೆ ಪ್ರಿಯವಾಗುತ್ತದೆ” ಎಂದು ತೆಗೆ ತೆಗೆದು ಇರಿಸುತ್ತಾಳೆ. ಸಿಹಿಯಾದ ಹಣ್ಣುಗಳನ್ನು ಮಾತ್ರ ಕೊಡಬೇಕೆಂದು ಹುಳಿಯೋ ಸಿಹಿಯೋ ಎಂದು ಕಚ್ಚಿ ಕಚ್ಚಿ ನೋಡುತ್ತಾಳೆ. ಹುಳಿಯಿದ್ದರೆ ಹೊರಗೆ ಎಸೆಯುತ್ತಾಳೆ.
ಅದು ಎಂಜಲಾಗದೆ? ರಾಮ ತಿನ್ನಬಹುದೇ? ದೇವರಿಗೆ ಎಂಜಲು ಅರ್ಪಿಸಬಹುದೇ? ಇದಾವುದೂ ಅವಳನ್ನು ಕಾಡಲೇ ಇಲ್ಲ. ಪ್ರೀತಿಗೆ ಎಂಜಲೆಲ್ಲಿ? ಮೈಲಿಗೆಯೆಲ್ಲಿ? ಅಲ್ಲದೇ ದೇವರ ಊರಿನಲ್ಲಿ ಮೇಲು ಕೀಳು, ಬಡವ ಬಲ್ಲಿದ ಪವಿತ್ರ ಅಪವಿತ್ರ ಸ್ಪೃಶ್ಯ ಅಸ್ಪೃಶ್ಯ ಎಂಬೆಲ್ಲ ಬೇಧ ಭಾವವಾದರೂ ಎಲ್ಲಿ? ಶಬರಿಯ ವಾತ್ಸಲ್ಯ ಭಕ್ತಿಯ ಮಹಾಪೂರದಲ್ಲಿ ಎಲ್ಲ ತಡೆಗೋಡೆಗಳೂ ಕೊಚ್ಚಿ ಹೋಗಿದ್ದವು.

ರಾಮ ಅಯೋಧ್ಯೆಯ ರಾಜಪುತ್ರ. ತಾನು ಬೇಡರ ಜಾತಿಯ ಕೀಳು ಮಹಿಳೆ. ತನ್ನಂತಹ ಹೀನಳ ಗುಡಿಸಲಿಗೆ ಆತ ಬರುತ್ತಾನೊ ಇಲ್ಲವೊ ಈ ಯಾವ ಸಂಶಯವೂ ಅವಳನ್ನು ಕಾಡಲಿಲ್ಲ. ರಾಮನನ್ನು ಅಷ್ಟು ಚೆನ್ನಾಗಿ ಅವಳು ಪರಿಭಾವಿಸಿದ್ದಳು. ಅವಳ ಭಕ್ತಿ ಅತ್ಯುತ್ತಟ, ನಿಸ್ಸಂಶಯ, ನಿರ್ವಿಕಾರ ನಿಶ್ಚಲ ಭಕ್ತಿಯಾಗಿತ್ತು.
ಅಯ್ಯೋ! ರಾಮ ಇಂದು ಬಂದಿಲ್ಲ. ನನ್ನ ರಾಮ ಯಾಕಿನ್ನೂ ಬಂದಿಲ್ಲ. ಇಂದು ಬರಲೇ ಇಲ್ಲವಲ್ಲ! ದಾರಿಯಲ್ಲೇನಾದರೂ ತೊಂದರೆಯಾಯಿತೆ? ಹೀಗೆ ಕಾದು ಕಾದು ದಿನಾಂತದಲ್ಲಿ ನಿಟ್ಟುಸಿರಿಡುತ್ತಾಳೆ. ಅದು ರಾಮನನ್ನು ಕಾಣುವ ತವಕವಷ್ಟೆ ವಿನಾ ಅವಳಿಗೆ ಅದು ಕಷ್ಟವಲ್ಲ. ರಾಮನ ಸಂಗತಿಯೇ ಅವಳಿಗೆ ಪುಳಕ.

*** ಮುಂದುವರಿಯುವುದು...

Name : ವನರಾಗ ಶರ್ಮಾ ವನರಾಗ ಶರ್ಮಾ
Mobile no : +91-999999999
Write Comments
*Name :
*Comment :
(Max.1000 Characters)
  
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited